Monday, November 28, 2011

Shaale

ಶಾಲೆ

ತೆರೆದರೆ ತೋಯ್ವುದೆನ್ನಯ ಮನಸು
ಶಾಲೆ ನಡೆಸುವುದಿಲ್ಲಿ ಕನಸು

ಹರಿವುದಿಲ್ಲಿ ಹೊಳೆಯು ಕೊಯ್ದು ಕಾಡು
ಹಕ್ಕಿ ಹಾಡಿದ್ದುಂಟು ನಾ ಬರೆದ ಹಾಡು

ಹರೆಯ ಹೆಡೆಬಿಚ್ಚಿ ಮೆರೆವುದುಂಟು
ಹೊರತಲ್ಲ ಹೃದಯಕ್ಕೆ ಯಾವ ನಂಟೂ

ಪ್ರೇಮ ಬಂದಿದ್ದಳಿಲ್ಲಿ ಮದುವೆ ಮುನ್ನ
ಬರೆದಿದ್ದಳೆನೇನೋ ಕವನ

ಇರದೇ ನನ್ನಲ್ಲೇ ತಟ್ಟುತಿಹವೆಲ್ಲೋ ಕದವ
ಮುಟ್ಟಿದರೆ ತೆರೆವೆಯ ನಿನ್ನ ಮನವ

Saturday, November 19, 2011

Dooravaade drushtiyalli

ಹೊರತಾದೆ ನಿನ್ನೊಲವಿನೊಳಮನೆಗೆ
ವೃತದಿ ಬೇಯುವ ಭಕುತನಾದೆ
ನಿನ್ನ ಚೆಲುವಿನ ಚುಂಬಕದ ಸುಳಿಯಲ್ಲಿ
ಸುತ್ತುವ ಗೃಹಗತಿಯ ಗೋಲವಾದೆ

ನೆನೆದು ನಿನ್ನನು ಇಂದು ನಡೆವೆಡೆ
ಬಾಡುತಿಹ ಬಯಕೆ ಬಳ್ಳಿಗಳ ಹಿಂಡು
ಅದರಲಿ ಹಳೆಯ ಹೂಗಳ ದಂಡೆ
ಎದೆಯೊಳು ಹಂಬಲಗಳ ದಂಗೆ

ನಿನ್ನುಸಿರ ಸಿಹಿಗಂಪ ಉಳಿಸಲಾರದು ಸಾವು
ಎನ್ನ ನರನಾಡಿಯಲಿ ಎಂಬ ಚಿಂತೆ
ಬಾಳ ಬಿಗಿದಿಹ ಕಂಬ ನಿನ್ನ ಬಯಕೆಯ ನೋವು
ನೆನಹುಗಳು ನಿತ್ಯದಿ ಗೈವ ಧ್ಯಾನದಂತೆ

ಹುಟ್ಟಿನಲಿ ನೀ ಹತ್ತಿರ ನನಗೆ
ದೂರವಾದೆ ಯೇಕೆ 'ದೃಷ್ಟಿಯಲ್ಲಿ'?!
ಗತಜನ್ಮದಂತಾದೆ ಉಸಿರಿರಲು ನನಗೆ
ಸಿಗಲಾರೆಯೇನು ಮತ್ತೆ ಈ ಸೃಷ್ಟಿಯಲ್ಲಿ!!?

Deepavali

ಇದುವೆ ದೀಪಾವಳಿಯ ಬೆಳಗು
ಸಂಜೆಯಲ್ಲೂ ಸೂಸುವುದು ಇದರ ಸೊಬಗು

ಬೆಳಗುವ ಹಂಬಲಗಳಿಗೆ
ಇಂಧನ ಇಹುದಿಂದು
ಜಡತೆ ಜಗದಿಂದ ಜಾರಿಹುದು
ಬಿಸಿನೀರ ಮಿಂದು
ಇದುವೆ ದೀಪಾವಳಿಯ ಬೆಳಗು

ಸ್ವರ್ಗದ ಬಾಗಿಲು ತೆರೆದು ತೋರಿದೆ
ಭಿವಿಗೆ ಇಳಿವರ ಸಾಲು ಕಾದಿದೆ
ಇದುವೆ ದೀಪಾವಳಿಯ ಬೆಳಗು
ಹಣತೆ ಆರತಿ ಹಾನಗಳು ಇರಲಿ
ದೇವತೆಗಳಿಂದು ನೆಂಟರಾಗಿ ಬರಲಿ
ಇದುವೆ ದೀಪಾವಳಿಯ ಬೆಳಗು
ಸಂಜೆಯಲ್ಲೂ ಸೂಸುವುದು ಇದರ ಸೊಬಗು

Mine for a moment!

ನನ್ನವಳಲ್ಲ ನೀನು ಚೆಲುವೆ
ನನ್ನ ಕಣ್ಣಿನ ಪಟದ ಭಾವಚಿತ್ರ
ನನ್ನ ಕಂಗಳ ಕೊಳದಿ
ಗಜ್ಜೆಯ ಕಾಲುಗಳು ಕುಲುಕಿ
ತುಳುಕಿಸಿದಲೆಯ ವೃತ್ತ
ಮಳೆಯ ಮುತ್ತುಗಳಂತೆ
ನಿನ್ನ ನಗುವಿನ ಹನಿಯು
ಕುಣಿದಾಡಿ ತಿಳಿಯಾಗಿ ಹರಿಯುತಿದೆ
ಸುರಿದು ನನ್ನಯ ಶಿರದ ಮೇಲೆ
ಕಲ್ಲಿನೆದೆಯಲಿ ಕಾಲುವೆಯ ಕೊರೆಯುತಿದೆ
ಕ್ಷಣಕಷ್ಟೇ ನೀ ನನ್ನೊಡನೆ, ಬಾಲೆ

ನಿನ್ನ ಸುಖದರಮನೆಗೆ
ಸಾಲದೆನ್ನೆರಡು ತೋಳುಗಳು
ಕರೆದು ಕಣ್ಮರೆಯಾಗುವ
ಬೆಟ್ಟದ ನವಿಲು ನೀನು
ನಿನ್ನ ನಗುವಿನ ಧ್ವನಿಯ
ನೆನಪೇ ಬೆಳದಿಂಗಳು
ನನ್ನ ತೀಡಿದಾ ನೋಟದ
ಗರಿಯು ನನ್ನದಲ್ಲವೇನು?